ಬಳ್ಳಾರಿ: ಲಾಕ್‍ಡೌನ್ ಸಡಿಲಿಕೆಯಾದ ಹಿನ್ನೆಲೆ ಜಿಲ್ಲೆಯ ಜಿಂದಾಲ್ ಸಮೂಹ ಸಂಸ್ಥೆಯನ್ನು ಸಂಪೂರ್ಣ ಲಾಕ್‍ಡೌನ್ ಮಾಡಲು ಆಗಲ್ಲವೆಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರಿನ ಜುಬಿಲೆಂಟ್ ಕಾರ್ಖಾನೆ ಸಣ್ಣ ಪ್ರಮಾಣದ ಉತ್ಪಾದನೆ ಹೊಂದಿದೆ. ಅಲ್ಲದೇ ಅದು ಕೇವಲ 1 ಸಾವಿರ ನೌಕರರನ್ನ ಮಾತ್ರ ಹೊಂದಿದೆ. ಹೀಗಾಗಿ, ಕಾರ್ಖಾನೆಯನ್ನು ಲಾಕ್‍ಡೌನ್ ಮಾಡಿ ಕೊರೊನಾ ಸೋಂಕಿತರ ಸಂಖ್ಯೆಯನ್ನು ಸೊನ್ನೆಗೆ ತರಲಾಯಿತು. ಆದರೆ, ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆ ಸುಮಾರು 30 ಸಾವಿರ ನೌಕರರನ್ನು ಹೊಂದಿದೆ. ಉತ್ಪಾದನಾ ಚಟುವಟಿಕೆಯಲ್ಲಿ ಸದಾ ಸಕ್ರಿಯವಾಗಿರುವ ಈ ಕಾರ್ಖಾನೆಯನ್ನ ಕೇಂದ್ರ ಸರ್ಕಾರದ ಗೈಡ್ ಲೈನ್ಸ್ ಪ್ರಕಾರ ಲಾಕ್‍ಡೌನ್ ಮಾಡಲು ಬರುವುದಿಲ್ಲ ಎಂದರು.
ಕಂಟೈನ್‍ಮೆಂಟ್ ಝೋನ್: ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆಯನ್ನು ಈಗ ದೊಡ್ಡ ಕಂಟೈನ್‍ಮೆಂಟ್ ಝೋನ್ ಆಗಿ ಘೋಷಿಸಲಾಗಿದೆ. ಹೊರಗಿಂದ ನೌಕರರನ್ನ ಕರೆ ತರುವ ಪ್ರಕ್ರಿಯೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದೆ. ನಾನಾ ರೀತಿಯ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಅಂದಾಜು 898 ಜನರನ್ನು ಈಗಾಗಲೇ ಜೆಎಸ್‍ಡಬ್ಲ್ಯು ಗುರುತಿಸಿ, ಅವರಿಗೆ ವೇತನ ಸಹಿತ ರಜೆ ನೀಡಿ ಮನೆಗೆ ಕಳಿಸಿಕೊಟ್ಟಿದೆ. ಜೊತೆಗೆ ಸುಮಾರು 1086 ಮಂದಿಯನ್ನ ಕ್ವಾರಂಟೈನ್ ಮಾಡಲಾಗಿತ್ತು. ಅದರಲ್ಲಿ 246 ಮಂದಿಗೆ ಪಾಸಿಟಿವ್ ಬಂದಿದೆ. ಉಳಿದ 300 ಮಂದಿಯ ತಪಾಸಣೆ ವರದಿ ಇಂದು ಅಥವಾ ನಾಳೆ ಬರಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಮೂರನೇ ಬಲಿ: ಇತ್ತ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಸೋಂಕಿಗೆ ಇಂದು ಮತ್ತೊಂದು ಬಲಿಯಾಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ. ಆಂಧ್ರಪ್ರದೇಶದ ಆದೋನಿ ಮೂಲದ 62 ವರ್ಷದ ವ್ಯಕ್ತಿ ರೋಗಿ-7,732 ಇಂದು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್. ಎಸ್.ನಕುಲ್ ಸ್ಪಷ್ಟಪಡಿಸಿದ್ದಾರೆ.
ಬಹು ಅಂಗಾಂಗ ವೈಫಲ್ಯತೆಯಿಂದ ಬಳಲುತ್ತಿದ್ದ ಈ ವ್ಯಕ್ತಿ, ಕಳೆದ ಜೂನ್ 17 ರಂದು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ಲಕ್ಷಣಗಳು ಕಂಡು ಬಂದ ಹಿನ್ನೆಲೆ ತಪಾಸಣೆ ಮಾಡಲಾಗಿತ್ತು. ವರದಿ ಬಂದ ಬಳಿಕ ಕೊರೊನಾ ಪಾಸಿಟಿವ್ ಎಂದು ದೃಢಪಟ್ಟಿತ್ತು. ನಂತರ ಜಿಲ್ಲಾ ಕೋವಿಡ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಮೃತಪಟ್ಟಿದ್ದಾರೆಂದು ಡಿ.ಸಿ ನಕುಲ್ ತಿಳಿಸಿದ್ದಾರೆ.