ಬೆಂಗಳೂರು: ಜೆಡಿಎಸ್ ನಿಂದ ಹೆಚ್ ಡಿ ದೇವೇಗೌಡ ಹಾಗೂ ಕಾಂಗ್ರೆಸ್ಸಿನಿಂದ ಹಿರಿಯ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಅವರು ಹಿರಿಯ ನಾಯಕರ ಕಾಲೆಳೆದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, ಸುದೀರ್ಘವಾದ ರಾಜಕೀಯ ಬದುಕಿನ ಬಹುಷಃ ಕೊನೆಯ ಹೋರಾಟದಲ್ಲಿ, ಹಿಂಬಾಗಿಲೆನ್ನುವ ರಾಜ್ಯಸಭೆಗೆ ಹೋಗವಂತಾಗಿದ್ದು ವಿಧಿಯ ಆಟ. ಆದರೆ ಈ ಮುತ್ಸದ್ದಿಗಳ ಸೇವೆ ಹಾಗೂ ಹೋರಾಟ ಅನುಕರಣೀಯ. ದೇವರು ಇಬ್ಬರಿಗೂ ಒಳ್ಳೆಯ ಆರೋಗ್ಯವನ್ನು ಕರುಣಿಸಲಿ. ಬಿಜೆಪಿಯ ಉದಾರತೆಗೆ ಅಭಿನಂದನೆಗಳು ಎಂದು ಬರೆದು ಬಿಜೆಪಿ ಆಫ್ ಕರ್ನಾಟಕ ಹಾಗೂ ಹೆಚ್ ಡಿ ದೇವೇಗೌಡರಿಗೆ ಟ್ಯಾಗ್ ಮಾಡಿದ್ದಾರೆ.

ನಮ್ಮ ಪಕ್ಷದ ಶಾಸಕರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಷ್ಟ್ರದ ಹಲವು ನಾಯಕರ ಮನವಿಯ ಮೇರೆಗೆ ಮಾಜಿ ಪ್ರಧಾನಿ ದೇವೇಗೌಡ ಅವರು ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಎಲ್ಲರ ಒಮ್ಮತದ ಅಭಿಪ್ರಾಯಕ್ಕೆ ಸಮ್ಮತಿಸಿದ ದೇವೇಗೌಡರಿಗೆ ಧನ್ಯವಾದಗಳು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ ಮಾಜಿ ಪ್ರಧಾನಿಯವರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ಆಯ್ಕೆಯಾಗಿರುವುದನ್ನು ಸ್ಪಷ್ಟಪಡಿಸಿದ್ದರು.

ಇತ್ತ ಜೂನ್ 19ರಂದು ನಡೆಯಲಿರುವ ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭ್ಯರ್ಥಿಯಾಗಿಸಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆದೇಶ ಹೊರಡಿಸಿದ್ದಾರೆ. ಇನ್ನು ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಶಾಕ್ ನೀಡಿದ್ದು, ಕಮಲದ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿ ನೀಡಿದ್ದ ಅಭ್ಯರ್ಥಿಗಳ ಪಟ್ಟಿಯಲ್ಲಿ ಇರದ ರಾಯಚೂರಿನ ಅಶೋಕ್ ಗಸ್ತಿ ಮತ್ತು ಬೆಳಗಾವಿಯ ಈರಣ್ಣ ಕಡಾಡಿ ಅವರಿಗೆ ರಾಜ್ಯಸಭಾ ಟಿಕೆಟ್ ನೀಡಿದೆ. ಈ ಮೂಲಕ ಕರ್ನಾಟಕದಲ್ಲಿ ಎದ್ದಿದ್ದ ಬಣ ರಾಜಕೀಯಗಳಿಗೆ ಬಿಜೆಪಿ ಹೈಕಮಾಂಡ್ ಬ್ರೇಕ್ ಹಾಕಿದ್ದು, ಇಬ್ಬರು ಸಂಘನಿಷ್ಠರಿಗೆ ಬಿಜೆಪಿ ಮಣೆ ಹಾಕಿದೆ.
Laxmi News 24×7