ಬೆಂಗಳೂರು: 17ನೇ ಮಹಡಿಯಿಂದ ಸಾಯಲು ಹೊರಟಿದ್ದ ಯುವತಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಸ್ನೇಹಾ (ಹೆಸರು ಬದಲಾಯಿಸಲಾಗಿದೆ) ಎಂಬಾಕೆಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಶುಕ್ರವಾರ ಮಧ್ಯರಾತ್ರಿ ಸುಮಾರು 1 ಗಂಟೆಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಎಲೆಕ್ಟ್ರಾನಿಕ್ ಸಿಟಿಯ ಅಗ್ನಿಶಾಮಕ ಸಿಬ್ಬಂದಿಯ ವರ್ಗ ಯುವತಿಯನ್ನು ರಕ್ಷಣೆ ಮಾಡಿದ್ದಾರೆ.
ನಡೆದಿದ್ದೇನು?
ಸ್ನೇಹಾ ದೆಹಲಿ ಮೂಲದ ಯುವತಿಯಾಗಿದ್ದು, ಎಲೆಕ್ಟ್ರಾನಿಕ್ ಸಿಟಿಯ ಪ್ರೆಸ್ಟೀಜ್ ಸನ್‍ರೈಸ್ ಅಪಾರ್ಟ್‌ಮೆಂಟ್‌ನ ತನ್ನ ಸಂಬಂಧಿಕರ ಮನೆಗೆ ಬಂದಿದ್ದಳು. ಲಾಕ್‍ಡೌನ್ ಇದ್ದಿದ್ದರಿಂದ ದೆಹಲಿಗೆ ವಾಪಸ್ ಹೋಗಿಲ್ಲ. ಯುವತಿ ಕೆಲ ವರ್ಷಗಳ ಹಿಂದೆ ತನ್ನ ತಾಯಿಯನ್ನು ಕಳೆದುಕೊಂಡಿದ್ದಳು. ಆದರೆ ತನ್ನ ಸಂಬಂಧಿಯ ಮನೆಯಲ್ಲಿ ತಾಯಿಯ ವರ್ಷದ ಕಾರ್ಯ ನಡೆದಿತ್ತು. ಇದರಿಂದ ಸ್ನೇಹಾ ನೊಂದಿದ್ದಳು.
ಇದರಿಂದ ಸ್ನೇಹಾ ಮಾನಸಿಕ ಖಿನ್ನತೆಗೊಳಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಳು. ಇದಕ್ಕಾಗಿ ಶುಕ್ರವಾರ ಮಧ್ಯರಾತ್ರಿ ಅಪಾರ್ಟ್‌ಮೆಂಟ್‌ನ 17ನೇ ಮಹಡಿಗೆ ಏರಿ ಕುಳಿತ್ತಿದ್ದಳು. ನಂತರ ಭಯದಲ್ಲಿ ಕಿಟಕಿಯ ಕೆಳ ಭಾಗದಲ್ಲಿ ಹೆದರಿ ಕುಳಿತ್ತಿದ್ದಳು. ಇದನ್ನು ಅಪಾರ್ಟ್‌ಮೆಂಟ್‌ನ ಅಸೋಸಿಯೇಷನ್ ವ್ಯಕ್ತಿ ಗಮನಿಸಿದ್ದಾರೆ. ತಕ್ಷಣ ಅವರು ಅಗ್ನಿಶಾಮಕ ಸಿಬ್ಬಂದಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದು, ಅವರ ತಾಳ್ಮೆ ಹಾಗೂ ಬುದ್ಧಿವಂತಿಕೆಯಿಂದ ಯುವತಿ ಬಚಾವ್ ಆಗಿದ್ದಾಳೆ. ಅಗ್ನಿಶಾಮಕ ಸಿಬ್ಬಂದಿಯ ಮಾತಿಗೆ ಸ್ನೇಹಾ ಸ್ಪಂದಿಸಿ ಕಿಟಕಿಯಿಂದ ಮೇಲೆ ಬಂದಿದ್ದಾಳೆ. ಈ ಮೂಲಕ ಯುವತಿಯನ್ನು ರಕ್ಷಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.