ಬಾಗಲಕೋಟೆ: ಮುಧೋಳದ ರೈತರ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಉಳಿಸುವಂತೆ ಒತ್ತಾಯಿಸಿ ಕೊನೆಗೂ ರೈತರು ಬೀದಿಗಿಳಿದಿದ್ದಾರೆ. ಮುಧೋಳದಿಂದ ಬಾಗಲಕೋಟೆವರೆಗೂ ಪಾದಯಾತ್ರೆ ಕೂಡ ಆರಂಭಿಸಿದ್ದಾರೆ.
ರೈತರ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದು, ರೈತರ ಬಾಕಿ ಹಣ ಪಾವತಿಗಾಗಿ ಈಗಾಗಲೇ ಜಿಲ್ಲಾಡಳಿತ ೪೦ ಕೋಟಿ ರೂ.ಗಳ ಸಕ್ಕರೆಯನ್ನು ಮಾರಾಟ ಮಾಡಿ ಹಣ ಪಾವತಿಸುವ ವ್ಯವಸ್ಥೆ ಮಾಡಿಕೊಂಡಿದೆ. ತಾಂತ್ರಿಕ ಕಾರಣಗಳಿಂದ ಇದುವರೆಗೂ ಬಾಕಿ ಹಣ ಪಾವತಿ ಆಗಿಲ್ಲ.
ಯಾವುದೇ ಕಾರಣಕ್ಕೂ ಸಹಕಾರಿ ರಂಗದಲ್ಲಿರುವ ರೈತರೇ ಹಣ ಕೂಡಿಸಿ ಕಟ್ಟಿರುವ ಕಾರ್ಖಾನೆ ಬಂದ್ ಆಗಬಾರದು. ಕಾರ್ಖಾನೆ ನಿರ್ವಹಣೆಯನ್ನು ಲೀಸ್ ಆಧಾರದ ಮೇಲೆ ಖಾಸಗಿ ಅವರಿಗೆ ವಹಿಸಬಾರದು ಎಂದು ಕಾರ್ಖಾನೆ ವ್ಯಾಪ್ತಿಯ ರೈತರು ಸಾಕಷ್ಟು ಬಾರಿ ಪ್ರತಿಭಟನೆ ಹೋರಾಟ ಮಾಡಿದ್ದಾರೆ.
ಇದೇ ವೇಳೆ ಕಾರ್ಖಾನೆ ಅಧ್ಯಕ್ಷ ಆರ್. ಎಸ್. ತಳೇವಾಡ ಸೇರಿದಂತೆ ನಿರ್ದೇಶಕ ಮಂಡಳಿಯ ಎಲ್ಲ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವ ನಾಟಕವಾಡಿ, ಬಳಿಕ ರಾಜೀನಾಮೆಗಳನ್ನು ವಾಪಸ್ ಪಡೆದುಕೊಂಡು, ಆನ್ ಲೈನ್ ಮೂಲಕ ಕಾರ್ಖಾನೆ ಸರ್ವ ಸದಸ್ಯರ ಸಭೆ ನಡೆಸಿದ್ದು ಈಗ ಇತಿಹಾಸ.
ರೈತರ ತೀವ್ರ ವಿರೋಧದ ನಡುವೆಯೇ ಕಾರ್ಖಾನೆ ನಿರ್ದೇಶಕ ಮಂಡಳಿ ಖಾಸಗಿ ಅವರಿಗೆ ಕಾರ್ಖಾನೆ ನಿರ್ವಹಣೆಯನ್ನು ಖಾಸಗಿ ಅವರಿಗೆ ಲೀಸ್ ಮೇಲೆ ನೀಡಲು ಠರಾವು ಕೂಡ ಪಾಸು ಮಾಡಿದ್ದಾರೆ. ಸದಸ್ಯರ ಈ ಸರ್ವಾಧಿಕಾರಿ ಧೋರಣೆ ವಿರೋಧಿಸಿ ಕಾರ್ಖಾನೆ ರೈತರು ಸಕ್ಕರೆ ಕಾರ್ಖಾನೆ ಉಳಿಸಿ, ಖಾಸಗಿಯವರಿಗೆ ಲೀಸ್ ಮೇಲೆ ನಿರ್ವಹಣೆ ಜವಾಬ್ದಾರಿ ನೀಡುವುದು ಬೇಡ ಎಂದು ಆಗ್ರಹಿಸಿ ಸೋಮವಾರ ಮುಧೋಳದಿಂದ ಪಾದಯಾತ್ರೆ ಆರಂಭಿಸಿದ್ದಾರೆ. ಪಾದಯಾತ್ರೆ ಮಂಗಳವಾರ ಬಾಗಲಕೋಟೆ ಜಿಲ್ಲಾಡಳಿತ ಭವನ ತಲುಪಲಿದೆ. ಅಷ್ಟರ ಮಧ್ಯೆ ಏನೇನು ಬೆಳವಣಿಗೆಗಳು ನಡೆಯಲಿವೆ ಎನ್ನುವುದು ಕುತೂಹಲದ ಸಂಗತಿ ಆಗಿದೆ.
ಪಾದಯಾತ್ರೆ ಯಾವುದೇ ರೈತಪರ ಸಂಘಟನೆಗಳ ನೇತೃತ್ವದಲ್ಲಿ ಆರಂಭಗೊಂಡಿಲ್ಲ. ರಾಜಕೀಯ ಪಕ್ಷವೊಂದರ ನೇತೃತ್ವದಲ್ಲಿ ಪಾದಯಾತ್ರೆ ಆರಂಭಗೊAಡಿದ್ದು, ಅನೇಕ ಜನ ರೈತ ಮುಖಂಡರೂ ಇದರಲ್ಲಿ ಭಾಗವಹಿಸಿದ್ದಾರೆ. ಹಾಗಾಗಿ ಇದು ಬಾಗಲಕೋಟೆ ತಲುಪುವ ಹೊತ್ತಿಗೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎನ್ನುವುದನ್ನು ಈಗಲೇ ವಿಶ್ಲೇಷಿಸಲಾಗದು.
ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕಾರ್ಖಾನೆಯನ್ನು ಸರ್ಕಾರ ವಶಕ್ಕೆ ಪಡೆದು ಕೂಡಲೇ ಆಡಳಿತಾಧಿಕಾರಿ ನೇಮಕ ಮಾಡಬೇಕು. ಕಾರ್ಖಾನೆಗೆ ಆಗಿರುವ ನಷ್ಟವನ್ನು ನಿರ್ದೇಶಕ ಮಂಡಳಿ ಸದಸ್ಯರ ಆಸ್ತಿ ಮುಟ್ಟುಗೋಲು ಹಾಕಿ ವಸೂಲಿ ಮಾಡಬೇಕು. ಆ ಮೂಲಕ ಕಾರ್ಖಾನೆ ನಷ್ಟವನ್ನು ಸರಿದೂಗಿಸಬೇಕು ಎನ್ನುವುದು ಪಾದಯಾತ್ರಿಗಳ ಆಗ್ರಹವಾಗಿದೆ.
ಸಹಕಾರಿ ರಂಗದ ಸಕ್ಕರೆ ಕಾರ್ಖಾನೆಯೊಂದನ್ನು ಉಳಿಸುವ ನಿಟ್ಟಿನಲ್ಲಿ ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿದ್ದರೂ ಕ್ಷೇತ್ರದ ಪ್ರತಿನಿಧಿಯೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರು ಮಾತ್ರ ದಿವ್ಯ ಮೌನಕ್ಕೆ ಶರಣಾಗಿದ್ದಾರೆ. ಕಾರ್ಖಾನೆ ವಿಷಯ ತಮಗೆ ಸಂಬAಧಿಸಿದ್ದಲ್ಲ. ಕಾರ್ಖಾನೆಯ ಎಲ್ಲ ಸದಸ್ಯರು ಸೇರಿ ಏನು ನಿರ್ದಾರ ತೆಗೆದುಕೊಳ್ಳುತ್ತಾರೆ ಆ ನಿರ್ದಾರಕ್ಕೆ ಬದ್ದ ಎಂದು ಹೇಳಿ ಕೈ ತೊಳೆದುಕೊಂಡು ಬಿಟ್ಟಿದ್ದಾರೆ.
ರೈತರ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಮುಧೋಳ ಮೀಸಲು ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ ಎನ್ನುವ ಜತೆಗೆ ಕಾರ್ಖಾನೆ ಕಟ್ಟುವಲ್ಲಿ, ಅದನ್ನು ಮುನ್ನಡೆಸಿಕೊಂಡು ಹೋಗುವಲ್ಲಿ ಕಾರಜೋಳರೂ ಪ್ರಮುಖ ಪಾತ್ರ ವಹಿಸಿದ್ದರು ಎನ್ನುವುದು ಗಮನಾರ್ಹ. ಆದರೀಗ ಅದು ಸಂಬಂಧವಿಲ್ಲ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ.
ಮುಧೋಳ ಕ್ಷೇತ್ರದ ಶಾಸಕರಾಗಿಯಾದರೂ ಸರ್ಕಾರದಲ್ಲಿನ ತಮ್ಮ ಪ್ರಭಾವ ಬಳಸಿಕೊಂಡು ಕಾರ್ಖಾನೆ ಉಳಿಸಿಕೊಳ್ಳಲು ಈಗಲೂ ಸಾಕಷ್ಟು ಅವಕಾಶಗಳಿದ್ದರೂ ಆ ಗೋಜಿಗೆ ಹೋಗುತ್ತಿಲ್ಲ. ಕಾರ್ಖಾನೆ ನಿರ್ದೇಶಕ ಮಂಡಳಿಯಲ್ಲಿರುವವರೆಲ್ಲ ಇವರ ಬೆಂಬಲಿಗರಾಗಿದ್ದಾರೆ. ಕಾರ್ಖಾನೆ ವಿಷಯದಲ್ಲಿ ಕೈ ಹಾಕಿದಲ್ಲಿ ಎಲ್ಲಿ ಅದು ತಮ್ಮ ಭವಿಷ್ಯದ ರಾಜಕಾರಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೋ ಎನ್ನುವ ಕಾರಣಕ್ಕೆ ಈ ವಿಷಯದಲ್ಲಿ ಪಲಾಯವಾದಕ್ಕೆ ಅಂಟಿಕೊಂಡಿದ್ದಾರೆ.
ಯಾರು ಕಾರ್ಖಾನೆ ಉಳಿವಿಗಾಗಿ ಮುಂಚೂಣಿಯಲ್ಲಿ ನಿಂತುಕೊAಡು, ಕಾರ್ಖಾನೆ ಪರವಾಗಿ ಸರ್ಕಾರದ ಮಟ್ಟದಲ್ಲಿ ಆರ್ಥಿಕ ನೆರವಿಗಾಗಿ ಹೋರಾಟ ಮಾಡಬೇಕಿತ್ತೋ ಅವರೆ ಮೌನಕ್ಕೆ ಶರಣಾಗಿದ್ದಾರೆ. ಪರಿಣಾಮವಾಗಿ ಕಾರ್ಖಾನೆಯನ್ನು ಉಳಿಸುವವರು ಯಾರು ಎನ್ನುವುದು ಯಕ್ಷಪ್ರಶ್ನೆಯಾಗಿ ಪರಿಣಮಿಸಿದೆ. ಕಾರ್ಖಾನೆ ವ್ಯಾಪ್ತಿಯ ಕೆಲ ರೈತರ ಮುಖಂಡರನ್ನು ಬಿಟ್ಟರೆ ಉಳಿದವರಾರೂ ಕಾರ್ಖಾನೆ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗದೇ ಇರುವುದು ದುರದೃಷ್ಟಕರ ಸಂಗತಿಯಾಗಿದೆ. ಪ್ರತಿಪಕ್ಷ ಕಾಂಗ್ರೆಸ್ ನಾಯಕರೂ ಹೇಳಿಕೆಗಳಿಗೆ ಸೀಮಿತವಾಗಿ ಸುಮ್ಮನಾಗಿ ಬಿಟ್ಟಿದ್ದಾರೆ.
ಇಂತಹ ಸಂದಿಗ್ದ ಸಮಯದಲ್ಲಿ ಕಾರ್ಖಾನೆ ಉಳಿವಿಗಾಗಿ ಆರಂಭಗೊAಡಿರುವ ಪಾದಯಾತ್ರೆಯ ಪರಿಣಮ ಏನಾಗಲಿದೆ ಎನ್ನುವುದು ಅದು ಜಿಲ್ಲಾಡಳಿತ ಭವನ ತಲುಪಿದ ಬಳಿಕವೇ ಸ್ಪಷ್ಟವಾಗಲಿದೆ.