ಚಿಕ್ಕಬಳ್ಳಾಪುರ: ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಪತಿಯ ಚಿಕಿತ್ಸೆಗಾಗಿ ಪತ್ನಿ ತನ್ನ ತಾಳಿಯನ್ನೇ ಮಾರಿರುವ ಮನಕಲಕುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೆ.ಕುರಪ್ಪಲ್ಲಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಗ್ರಾಮದ ಬೀರಮ್ಮ ಹಾಗೂ ಬೆಂಗಳೂರು ಮೂಲದ ಲಿಂಗಪ್ಪ ವಿವಾಹವಾಗಿ ಇಬ್ಬರು ಮಕ್ಕಳಿದ್ದಾರೆ. ಇಷ್ಟು ದಿನ ಬೆಂಗಳೂರಿನಲ್ಲಿ ಗಾರೆಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಲಾಕ್‍ಡೌನ್‍ಗೂ ಮುನ್ನ ಬೀರಮ್ಮಳ ಸ್ವಗ್ರಾಮ ಕೆ.ಕುರಪ್ಪಲ್ಲಿಗೆ ಬಂದು ಬಾಡಿಗೆ ಮನೆ ಮಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಲಿಂಗಪ್ಪನಿಗೆ ಹೃದಯಾಘಾತವಾಗಿದ್ದು, ಬೆಂಗಳೂರಿನ ಜಯದೇವ ಹಾಗೂ ಕೋಲಾರದ ಆರ್ ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ತೋರಿಸಿದ್ದಾರೆ.
ಸುಮಾರು 2 ಲಕ್ಷ ರೂಪಾಯಿ ಸಾಲ ಮಾಡಿ ಶಸ್ತ್ರಚಿಕಿತ್ಸೆ ಮಾಡಿಸಿದ್ದೇನೆ. ಆದರೆ ಅದಾದ ನಂತರ ಮಾತ್ರೆಗಳಿಗೂ ಹಾಗೂ ಜೀವನ ನಿರ್ವಹಣೆಗೆ ಹಣ ಇಲ್ಲ ಅಂತ ಕತ್ತಿನಲ್ಲಿದ್ದ ತಾಳಿಯನ್ನೇ ಚಿಂತಾಮಣಿಯಲ್ಲಿ 5,000 ರೂಪಾಯಿಗೆ ಮಾರಿದೆ ಎಂದು ಪತ್ನಿ ಬೀರಮ್ಮ ನೋವಿನಿಂದ ಅಳಲು ತೋಡಿಕೊಂಡಿದ್ದಾರೆ.
ಸದ್ಯ ಕೊರಳಿಗೆ ಅರಿಶಿಣ ಕೊಂಬು ಕಟ್ಟಿಕೊಂಡು, ಗ್ರಾಮದಲ್ಲಿ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಪತಿಗೆ ಮಾತ್ರೆ ತಂದು ಕೊಡಲು ಹಣವಿಲ್ಲ. ಹೀಗಾಗಿ ಮಾತ್ರೆ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದಾರೆ. ಹೀಗಾಗಿ ಯಾರಾದರೂ ತಮಗೆ ಸಹಾಯ ಮಾಡಿ ಅಂತ ಕೈ ಮುಗಿದು ಮನವಿ ದಂಪತಿ ಮಾಡಿಕೊಂಡಿದ್ದಾರೆ.