ಮೈಸೂರು: ವ್ಯಕ್ತಿಯೊಬ್ಬ ಜಿಲ್ಲೆಯಲ್ಲಿ ನಾಣ್ಯ, ನೋಟು ಎಸೆದು ಹೋಗಿದ್ದು, ಇದರಿಂದ ಜನರು ತುಂಬಾ ಗಾಬರಿಗೊಂಡಿದ್ದರು. ಆದರೆ ಇದೀಗ ಕಳ್ಳತನ ಮಾಡಿದ್ದ ಸೈಕಲನ್ನು ತೆಗೆದುಕೊಂಡು ಹೋಗುವಾಗ ಗಾಬರಿಯಲ್ಲಿ ಹಣ, ನಾಣ್ಯ ಕೆಳಗೆ ಬೀಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೈಸೂರಿನ ದೇವರಾಜ ಮೊಹಲ್ಲಾದ ಬೋಟಿ ಬಜಾರ್ ಬೀದಿಯಲ್ಲಿ ವ್ಯಕ್ತಿಯೊಬ್ಬ ಹಣ, ನ್ಯಾಣ ಎಸೆದು ಹೋಗಿದ್ದನು ಎಂದು ಹೇಳಲಾಗಿತ್ತು. ಬೀದಿಯಲ್ಲಿ ಬಿದ್ದಿದ್ದ ನಾಣ್ಯ, ನೋಟನ್ನು ಟೀ ಅಂಗಡಿ ಮಾಲೀಕ ಬಾಬು ಎತ್ತಿಕೊಂಡಿದ್ದರು. ಎಲ್ಲವೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ನಂತರ ಬಾಬುರನ್ನು ಸಂಪೂರ್ಣ ಸ್ಯಾನಿಟೈಸರ್ ಮಾಡಿ ಕ್ವಾರಂಟೈನ್ ಮಾಡಲಾಗಿತ್ತು. ಇದೀಗ ಘಟನೆಯ ಬೇರೆ ಬೇರೆ ಸಿಸಿ ಕ್ಯಾಮೆರಾ ದೃಶ್ಯಗಳು ಲಭ್ಯವಾಗಿದ್ದು, ತನಿಖೆ ವೇಳೆ ಸೈಕಲ್ ಕದ್ದಿರುವ ಮಾಹಿತಿ ಬೆಳಕಿಗೆ ಬಂದಿದೆ.
ವ್ಯಕ್ತಿಯೊಬ್ಬ ಬೆಳಗ್ಗಿನ ಜಾವ ಸೈಕಲ್ ಮೂಲಕ ಹಣ ಬೀಳಿಸಿಕೊಂಡು ಹೋಗಿದ್ದ ಬಗ್ಗೆ ಮಾಹಿತಿ ಬಂದಿತ್ತು. ಈ ಬಗ್ಗೆ ತನಿಖೆ ಕೈಗೊಂಡಿದ್ದೇವೆ. ಆತ ಸಮೀಪದಲ್ಲಿ ಸೈಕಲ್ ಬಿಟ್ಟುಹೋಗಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ಮಾಡಲಾಗುತ್ತಿದೆ. ಸೈಕಲ್ ಕಳ್ಳತನ ಮಾಡಿ ತೆಗೆದುಕೊಂಡು ಹೋಗುವಾಗ ಗಾಬರಿಯಲ್ಲಿ ಹಣ, ನಾಣ್ಯ ಕೆಳಗೆ ಬೀಳಿಸಿದ್ದಾನೆ. ಈಗ ಆ ಸೈಕಲ್ ಪತ್ತೆಯಾಗಿದೆ ಎಂದು ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ಮಾಹಿತಿ ನೀಡಿದ್ದಾರೆ.
ಹಣ, ನಾಣ್ಯ ಬಿದ್ದಿರುವುದನ್ನು ನೋಡಿ ಕೆಲ ಕಿಡಿಗೇಡಿಗಳು ಇದರಿಂದ ಕೊರೊನಾ ಹರಡುತ್ತದೆ ಎಂಬ ವದಂತಿ ಹಬ್ಬಿಸಿದ್ದಾರೆ. ಆದರೆ ಜನರು ಯಾವುದೇ ಕಾರಣಕ್ಕೂ ಭಯಪಡಬೇಡಿ, ಇದರಿಂದ ಕೊರೊನಾ ಬರುವುದಿಲ್ಲ ಎಂದು ಪ್ರಕಾಶ್‍ಗೌಡ ತಿಳಿಸಿದರು.