ಪ್ರಕರಣ ದಾಖಲಿಸಿಕೊಂಡ ಬಳ್ಳಾರಿ ಪೊಲೀಸರು (Bellary Police) ಈಗ ತಲೆ ಮರೆಸಿಕೊಂಡಿರೋ ಸಬ್ ರಿಜಿಸ್ಟಾರ್ ಗಾಗಿ ಹುಡುಕಾಟದಲ್ಲಿದ್ದಾರೆ. ಬಳ್ಳಾರಿಯಲ್ಲಿ ಸಬ್ ರಿಜಿಸ್ಟಾರ್ ಆಗಿ ಕೆಲಸ ಮಾಡುತ್ತಿರುವ ಉಮೇಶ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.ಈಗಾಗ್ಲೇ ಮದುವೆಯಾಗಿ ಮಕ್ಕಳನ್ನೂ ಹೊಂದಿರೋ ಉಮೇಶ್ ಮತ್ತೊಬ್ಬ ಮಹಿಳೆಗೆ ವಂಚಿಸಿ ಮದುವೆಯಾಗಿರೋ ಆರೋಪವನ್ನೀಗ ಹೊತ್ತಿದ್ದಾರೆ.
ಮೊದಲ ಹೆಂಡತಿಯನ್ನು ಅತ್ತಿಗೆ ಎಂದ..!?
ಸಬ್ ರಿಜಿಸ್ಟಾರ್ ಉಮೇಶ್, ನಜ್ಮೀನ್ ಖಾನ್ ಎಂಬ ಮಹಿಳೆಯನ್ನು ವಂಚಿಸಿ, ತನ್ನ ಹೆಸರನ್ನು ರೆಹಾನ್ ಅಹಮದ್ ಎಂದು ಸುಳ್ಳು ಹೇಳಿ ಮದುವೆಯಾಗಿದ್ದಾನೆ. ಮದುವೆಯಾಗಿ ಕೆಲ ವರ್ಷಗಳ ನಂತರ ಅನುಮಾನಗೊಂಡ ನಜ್ಮೀನ್ ಖಾನ್ ಉಮೇಶ್ ನ ಫೋನ್ ನಲ್ಲಿದ್ದ ಮೊದಲ ಹೆಂಡತಿ ಹಾಗೂ ಮಕ್ಕಳ ಫೋಟೋ ಕುರಿತು ಪ್ರಶ್ನೆ ಮಾಡಿದ್ದಾಳೆ. ಆಗ ತಪ್ಪಿಸಿಕೊಳ್ಳಲು ಅವರು ನನ್ನ ಅತ್ತಿಗೆ ಹಾಗೂ ಅವರ ಮಕ್ಕಳು ಎಂದು ಸುಳ್ಳು ಹೇಳಿದ್ದಾನೆ. ಅದೇಗೋ ಈತನ ಕುರಿತು ಮಾಹಿತಿ ತಿಳಿದುಕೊಂಡ ನಜ್ಮೀನ್ ಖಾನ್ ಈಗ ಬಳ್ಳಾರಿ ಪೊಲೀಸರ ನೆರವಿಗಾಗಿ ಮಗುವಿನೊಂದಿಗೆ ಠಾಣೆಯಿಂದ ಠಾಣೆಗೆ ಅಲೆದಾಡುತ್ತಿದ್ದಾಳೆ. ಮೂಲತಃ ದೆಹಲಿಯ ನಜ್ಮೀನ್ ಖಾನ್, ಬೆಂಗಳೂರಲ್ಲಿ ಮಾಡೆಲ್ ಆಗಿ ಕೆಲಸ ಮಾಡ್ತಿದ್ದಾಗ ಉಮೇಶ್ ತನ್ನ ಹೆಸರು ಬದಲಾಯಿಸಿಕೊಂಡು ಸ್ನೇಹ ಬೆಳೆಸಿ, ಪ್ರೀತಿಸಿ, ಮುಸ್ಲಿಂ ಧರ್ಮದಂತೆ ಮದುವೆಯಾಗಿ ಮಗವನ್ನು ದಯಪಾಲಿಸಿದ್ದಾನಂತೆ.
10 ಕೋಟಿ ವರದಕ್ಷಿಣೆಗೆ ಡಿಮ್ಯಾಂಡ್?
ನಜ್ಮೀನ್ ಖಾನ್ ಮೂರ್ನಾಲ್ಕು ವರ್ಷ ಬಳ್ಳಾರಿಗೆ ಬಂದು ಉಮೇಶ್ ಜೊತೆಗಿದ್ದಾಗ, ಉಮೇಶ್ ಗೆ ಅತ್ತಿಗೆ ಇಲ್ಲ, ಹೆಂಡತಿಯನ್ನೇ ಅತ್ತಿಗೆ ಎಂದು ಪರಿಚಯಿಸಿದ್ದಾನೆ ಎಂದು ನಜ್ಮೀನ್ ಗೆ ಗೊತ್ತಾಗಿದೆ. ಇದೆಲ್ಲ ಗೊತ್ತಾದಾಗ ಹತ್ತು ಕೋಟಿ ವರದಕ್ಷಿಣೆ ಕೊಡು ಎಂದು ಉಮೇಶ್ ಕೇಳಿದ್ದಾನಂತೆ. ಸದ್ಯ ಬಳ್ಳಾರಿಯ ಮಹಿಳಾ ಠಾಣೆಯಲ್ಲಿ ಸಬ್ ರಿಜಿಸ್ಟರ್ ವಿರುದ್ದ ನಜ್ಮೀನ್ ದೂರು ನೀಡಿದ್ದಾರೆ. ವಿಷಯ ಗೊತ್ತಾಗಿ ತಲೆಮರೆಸಿಕೊಂಡಿರುವ ಅಧಿಕಾರಿ ಉಮೇಶ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ನಜ್ಮೀನ್ ವಿರುದ್ಧ ಬ್ಲ್ಯಾಕ್ಮೇಲ್ ಆರೋಪ
ಇನ್ನು ಇದಕ್ಕೂ ಮೊದಲೇ ಹುಷಾರಾಗಿರೋ ಸಬ್ ರಿಜಿಸ್ಟಾರ್ ಉಮೇಶ್, ನಜ್ಮೀನ್ ಖಾನ್ ವಿರುದ್ದ ರಿಜಿಸ್ಟರ್ ದೂರು ನೀಡಿದ್ದಾನೆ. ನಜ್ಮೀನ್ ಸಮಸ್ಯೆ ಎಂದಾಗ ಒಂದು ಲಕ್ಷ ಹಣ ಕೊಟ್ಟು ಸಹಾಯ ಮಾಡಿದ್ದೆ, ಅದಕ್ಕಾಗಿ ಅವರು ನಿಮ್ಮ ಸಹಾಯಕ್ಕೆ ನನ್ನ ಬಳಿ ಕೊಡಲು ದೇಹ ಬಿಟ್ಟು ಬೇರೆ ಏನು ಇಲ್ಲ ಎಂದಿದ್ದರು. ಹೀಗಾಗಿ ನಾನು ಅವರೊಂದಿಗೆ ಒಂದು ಬಾರಿ ಲೈಂಗಿಕ ಸಂಬಂಧ ಹೊಂದಿದ್ದೆ. ಬಳಿಕ ನಾನು ಗರ್ಭಿಣಿ ಎಂದು ಹೇಳಿಕೊಂಡು ವೀಡಿಯೋಗಳನ್ನು ಯೂಟ್ಯೂಬ್ ಹಾಕುವುದಾಗಿ ಬೆದರಿಸಿ ಹಣ ಸುಲುಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ನಜ್ಮೀನ್ ಖಾನ್ ಹಾಗೂ ಅವರ ಕುಟುಂಬ ಸದಸ್ಯರಾದ ಇಸ್ಮಾಯಿಲ್, ಜರೀನಾ, ಮಹಮದ್ ತಲೀಬ್ ಸೇರಿ 33.5 ಲಕ್ಷ ಸುಲುಗೆ ಮಾಡಿದ್ದಾರೆಂದು ಉಮೇಶ್ ಬಳ್ಳಾರಿಯ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರಂತೆ. ಎರಡೂ ಪ್ರಕರಣಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಬಳ್ಳಾರಿ ಎಸ್ಪಿ ಸೈದುಲ್ ಅಡಾವತ್ ತಿಳಿಸಿದ್ದಾರೆ.
ತಪ್ಪು ಮಾಡಿರೋದು ನಜ್ಮೀನ್ ಖಾನೋ ಅಥವಾ ಸಬ್ ರಿಜಿಸ್ಟಾರ್ ಉಮೇಶನೋ ಗೊತ್ತಿಲ್ಲ. ಆದ್ರೆ ತಪ್ಪು ಮಾಡಿಲ್ಲ ಅಂದ್ರೆ ಊರು ಬಿಟ್ಟು ಹೋಗೋ ಅನಿವಾರ್ಯತೆ ಉಮೇಶನಿಗೇನಿತ್ತು ಎನ್ನೋದು ಅವರ ಕಚೇರಿಯಲ್ಲಿ ಕೆಲಸ ಮಾಡೋ ಸಿಬ್ಬಂದಿ ಮಾತು. ಸದ್ಯ ಪ್ರಕರಣ ಬಳ್ಳಾರಿ ಎರಡು ಸ್ಟೇಷನ್ ಗಳಲ್ಲಿ ದಾಖಲಾಗಿದ್ದು ಸತ್ಯಾಸತ್ಯತೆ ತನಿಖೆಯಿಂದ ಹೊರಬರಲಿದೆ.