ಚಿಕ್ಕಬಳ್ಳಾಪುರ: ಪೂಜೆಯ ವೇಳೆ ಕಾಲು ಜಾರಿ ಪ್ರಪಾತಕ್ಕೆ ಬಿದ್ದು ಪೂಜಾರಿಯೊಬ್ಬರು ಮೃತಪಟ್ಟಿದ್ದು, ನೆರೆದಿದ್ದ ಭಕ್ತರೆಲ್ಲ ನೋಡನೋಡುತ್ತಿದ್ದಂತೆ ಅವರ ದೇಹ ನೂರಾರು ಅಡಿ ಆಳಕ್ಕೆ ಉರುಳಿ ಬಿದ್ದಿದೆ. ಬೆಟ್ಟದ ಮೇಲಿನಿಂದ ಪೂಜಾರಿ ಕೆಳಕ್ಕೆ ಬೀಳುವ ದೃಶ್ಯ ಭಕ್ತರ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ವೈರಲ್ ಆಗಿವೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸಿಂಗನಮಲ ಗ್ರಾಮದ ಗಂಪಮಲ್ಲಯ್ಯಸ್ವಾಮಿ ಬೆಟ್ಟದಲ್ಲಿ ಈ ಅವಘಡ ನಡೆದಿದೆ. ಶ್ರಾವಣ ಮಾಸದಲ್ಲಿ ನಡೆಯುವ ವಿಶೇಷ ಪೂಜೆಯ ಸಂದರ್ಭದಲ್ಲಿ ಈ ದುರಂತ ನಡೆದುಹೋಗಿದೆ.
ಪೂಜೆಗೆ ತಯಾರಿಗೆ ಬಂದಿದ್ದ ಪೂಜಾರಿ, ಪೂಜೆ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಇನ್ನಿಲ್ಲವಾಗಿದ್ದಾರೆ. ಆರತಿ ಎತ್ತುತ್ತ ದೇವರ ವಿಗ್ರಹದ ಪಕ್ಕಕ್ಕೆ ಬಂದು ನಿಂತು ಇನ್ನೇನು ಮತ್ತೆ ಮುಂದುವರಿಯಬೇಕು ಎಂಬಷ್ಟರಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಬೆಟ್ಟದ ಅಂಚಿನಲ್ಲೇ ತೆರೆದ ಪ್ರದೇಶದಲ್ಲಿರುವ ದೇವರ ಪೂಜೆಯ ಸಂದರ್ಭದಲ್ಲಿ ಹೀಗಾಗಿದೆ. ಅವಘಡದ ದೃಶ್ಯ ನೋಡಿದ ಭಕ್ತರು ಭಯಭೀತರಾಗಿದ್ದಾರೆ.