ನವದೆಹಲಿ: ಚೀನಾ ಕೇವಲ ಭಾರತ ಮಾತ್ರವಲ್ಲ ಇತರೆ ನೆರೆ ದೇಶಗಳ ಗಡಿಗಳನ್ನು ಅತಿಕ್ರಮಿಸಿಕೊಳ್ಳುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ನೇಪಾಳದ ಗೂರ್ಖಾದ ಪ್ರದೇಶವನ್ನು ಚೀನಾ ಅತಿಕ್ರಮಿಸಿಕೊಂಡಿರುವ ಕುರಿತು ವರದಿಯಾಗಿದೆ. ಆದರೆ ಇದೆಲ್ಲವನ್ನು ಬಿಟ್ಟು ನೇಪಾಳ ಭಾರತದ ಗಡಿ ಕುರಿತು ಇದೀಗ ಹೆಚ್ಚು ಚರ್ಚೆ ನಡೆಸುತ್ತಿದೆ. ಅಲ್ಲದೆ ನೇಪಾಳದ ಜನರಲ್ಲಿ ಭಾರತ ವಿರೋಧಿ ಅಲೆಯನ್ನು ಎಬ್ಬಿಸುತ್ತಿದೆ.
ಮ್ಯಾಪ್‍ನಲ್ಲಿ ರುಯಿ ಗೌನ್ ಪ್ರದೇಶ ನೇಪಾಳಕ್ಕೆ ಒಳಪಟ್ಟಿದೆ. ಆದರೆ ಗೂರ್ಖಾದ ರುಯಿ ಭೋಟ್ ಅಧೀನದಲ್ಲಿದ್ದ ರುಯಿ ಗೌನ್ ಪ್ರದೇಶವನ್ನು ಚೀನಾ ಸ್ವಾಯತ್ತ ಪ್ರದೇಶಕ್ಕೆ ಒಳಪಡಿಸಿದೆ. 60ಕ್ಕೂ ಹೆಚ್ಚು ವರ್ಷಗಳಿಂದ ಇದನ್ನು ಟಿಬೆಟ್ ಅಧೀನಕ್ಕೆ ಒಳಪಡಿಸಲಾಗಿದೆ. ಸರ್ಕಾರಗಳ ದಿವ್ಯ ನಿರ್ಲಕ್ಷ್ಯ ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳ ಅಸಡ್ಡೆಯಿಂದಾಗಿ 72 ಮನೆಗಳಿರುವ ಹಳ್ಳಿಗೆ ಚೀನಾ ಒಳ ನುಸುಳಲು ಅವಕಾಶ ಮಾಡಿಕೊಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಈ ಪ್ರದೇಶವೀಗ ಸಂಪೂರ್ಣವಾಗಿ ಚೀನಾ ಹಿಡಿತದಲ್ಲಿದ್ದು, ಗಡಿ ಕಂಬಗಳನ್ನು ಸಹ ಸ್ಥಳಾಂತರಿಸುವ ಮೂಲಕ ಚೀನಾ ಒತ್ತುವರಿ ಮಾಡಿಕೊಂಡಿದೆ. ಆದರೆ ಗೂರ್ಖಾ ಭೂ ಕಂದಾಯ ಅಧಿಕಾರಿಗಳ ಮಾಹಿತಿ ಪ್ರಕಾರ, ರುಯಿ ಗ್ರಾಮದ ನಿವಾಸಿಗಳಿಂದ ಕಂದಾಯ ಸಂಗ್ರಹಿಸಿದ ಕುರಿತು ಈಗಲೂ ದಾಖಲೆಗಳಿವೆ ಎಂದು ತಿಳಿಸಿದ್ದಾರೆ.
ಇತಿಹಾಸ ತಜ್ಞ ರಮೇಶ್ ಧುಂಗಲ್ ಸಹ ಈ ಕುರಿತು ಸ್ಪಷ್ಟಪಡಿಸಿದ್ದು, ರುಯಿ ಹಾಗೂ ಟೈಘಾ ಗ್ರಾಮಗಳು ಗೂರ್ಖಾ ಜಿಲ್ಲೆಯ ಉತ್ತರ ಭಾಗಗಳು. ರುಯಿ ಗೌನ್ ಸಹ ನೇಪಾಳದ ಭಾಗ ಎಂದು ಹೇಳಿದ್ದಾರೆ. ಅಲ್ಲದೆ ಚೀನಾ ಗಡಿ ಕಂಬಗಳನ್ನು ನೆಡುವಾಗ ನೇಪಾಳ ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಹೀಗಾಗಿ ನೇಪಾಳ ರುಯಿ ಹಾಗೂ ಟೆಘಾ ಗ್ರಾಮಗಳನ್ನು ಕಳೆದುಕೊಂಡಿದೆ. ಇದೀಗ ಇವು ಟಿಬೆಟ್‍ಗೆ ಒಳಪಟ್ಟಿವೆ ಎಂದು ವಿವರಿಸಿದ್ದಾರೆ.
ಕೆಲ ಭ್ರಷ್ಠ ನೇಪಾಳಿ ಅಧಿಕಾರಿಗಳ ಕೃತ್ಯದಿಂದಾಗಿ ಚೀನಾ 35ನೇ ನಂಬರ್ ಪಿಲ್ಲರ್‍ನ್ನು ಸ್ಯಾಂಬೋ ಹಾಗೂ ರುಯಿ ಗೌನ್ ಪ್ರದೇಶದಲ್ಲಿ ನೆಟ್ಟಿದೆ. ಇದರಿಂದಾಗಿ ಈ ಪ್ರದೇಶಗಳು ಚೀನಾ ನಿಯಂತ್ರಣದಲ್ಲಿವೆ. ಅಲ್ಲದೆ ಗೌನ್, ಸ್ಯಾಂಬ್ಡೊ, ರುಯಿ ಪ್ರದೇಶಗಳ ಭಾಷೆ, ಸಂಸ್ಕøತಿ, ಸಂಪ್ರದಾಯ ಹಾಗೂ ಆಚರಣೆಗಳು ಒಂದೇಯಾಗಿವೆ. ಪ್ರಾರ್ಥನಾ ಮಂದಿರಗಳು ಸಹ ಒಂದೇ ರೀತಿ ಇವೆ ಎಂದು ಚುಮನುಬ್ರಿ ಗ್ರಾಮೀಣ ಮುನ್ಸಿಪಾಲಿಟಿ ವಾರ್ಡ್ ನಂ.1ರ ಅಧ್ಯಕ್ಷ ಬಿರ್ ಬಹದ್ದೂರ್ ಲಾಮಾ ತಿಳಿಸಿದ್ದಾರೆ.
ಟಿಬೆಟ್ ಜೊತೆಗೆ ಸೇರಿಕೊಳ್ಳಲು ಇಷ್ಟವಾಗದವರು ಸ್ಯಾಂಬ್ಡೊಗೆ ವಲಸೆ ಹೋದರು. ಅವರೆಲ್ಲರೂ ನಮ್ಮೊಂದಿಗೆ ಸಾವಿರಾರು ವರ್ಷಗಳ ಐತಿಹಾಸಿಕ ಹಾಗೂ ಸಾಂಸ್ಕøತಿಕ ದಾಖಲೆಗಳನ್ನು ಹೊಂದಿದ್ದಾರೆ ಎಂದು ಬಿರ್ ಬಹದ್ದೂರ್ ಲಾಮಾ ವಿವರಿಸಿದ್ದಾರೆ.
ಚೀನಾದೊಂದಿಗೆ ಇಷ್ಟೆಲ್ಲ ಗಡಿ ವಿವಾದಗಳಿದ್ದರೂ ಹೊಸ ಭೂಪಟದ ಸಂಬಂಧ ನೇಪಾಳ ವಿವಾದ ಹೆಚ್ಚಿಸುತ್ತಿದೆ. ಅಲ್ಲದೆ ಸರ್ಕಾರ ನೇಪಾಳದ ಜನರಲ್ಲಿ ಭಾರತದ ವಿರುದ್ಧ ದ್ವೇಷವನ್ನು ಹೆಚ್ಚಿಸಲು ರೇಡಿಯೋಗಳಲ್ಲಿ ಭಾರತ ವಿರೋಧಿ ಹಾಡುಗಳನ್ನು ಪ್ರಸಾರ ಮಾಡುತ್ತಿದೆ ಎಂದು ವರದಿಯಾಗಿತ್ತು. ಗಡಿ ಪ್ರದೇಶದಲ್ಲಿರುವ ಭಾರತದ ಉತ್ತರಾಖಂಡ ರಾಜ್ಯದ ಹಳ್ಳಿಗಳಲ್ಲಿ ನೇಪಾಳ ರೇಡಿಯೋ ಸಿಗ್ನಲ್ ಲಭ್ಯವಾಗುತ್ತವೆ. ಈ ವೇಳೆ ಭಾರತ ವಿರೋಧಿ ಹಾಡುಗಳು ಪ್ರಸಾರವಾಗುತ್ತಿರುವುದು ಖಚಿತವಾಗಿತ್ತು. ಈ ಮೂಲಕ ಭಾರತದ ವಿರುದ್ಧ ವ್ಯವಸ್ಥಿತವಾಗಿ ಜನರಿಗೆ ಅಪಪ್ರಚಾರ ನಡೆಸುವತ್ತ ನೇಪಾಳ ಸರ್ಕಾರ ಮುಂದಾಗಿದೆ.