ಮೈಸೂರು: ಹೆಣ್ಣು ಭ್ರೂಣ ಹತ್ಯೆಯಿಂದ ಸಮಾಜದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಅವರು ಇಂದು ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಮೈಸೂರು ವಿಭಾಗದ ಜಿಲ್ಲೆಗಳ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ಲಿಂಗಾನುಪಾತದ ಆಧಾರದ ಮೇಲೆ ಲೆಕ್ಕ ಹಾಕುವುದರ ಬದಲು, ಏಪ್ರಿಲ್ನಿಂದ ಅಕ್ಟೋಬರ್ ಮಾಹೆಯವರೆಗೆ ಜನನವಾದ ಮಕ್ಕಳಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಲೆಕ್ಕ ತೆಗೆದುಕೊಂಡು ಹೆಣ್ಣು ಮಗುವಿನ ಸಂಖ್ಯೆ ಕಡಿಮೆ ಇರುವ ಜಿಲ್ಲೆಯನ್ನು ಗುರಿಯನ್ನಾಗಿಸಿ ಹೆಚ್ಚು ಐ.ಇ.ಸಿ ಕಾರ್ಯಕ್ರಮ ಆಯೋಜಿಸುವಂತೆ ತಿಳಿಸಿದರು.
ಪ್ರತಿ ಜೀವವು ಅಮೂಲ್ಯವಾಗಿರುವುದರಿಂದಾಗಿ ಹೆರಿಗೆ ಸಂದರ್ಭದಲ್ಲಿ ತಾಯಂದಿರ ಮರಣ ಸಂಖ್ಯೆ ಶೂನ್ಯವಾಗಬೇಕು. ಗರ್ಭಿಣಿಯರು ತಪಾಸಣೆಗೆ ಒಳಗಾದಾಗ ಹೈ ರಿಸ್ಕ್ ಇರುವ ಪ್ರಕರಣಗಳ ಬಗ್ಗೆ ಹೆಚ್ಚು ನಿಗಾವಹಿಸಬೇಕು ಹಾಗೂ ತಾಯಂದಿರ ಮರಣ ಪ್ರಕರಣಗಳು ಶೂನ್ಯವಾಗಬೇಕು ಎಂದರು.
ಮಕ್ಕಳ ಮರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಏಪ್ರಿಲ್ನಿಂದ ಅಕ್ಟೋಬರ್ವರೆಗೆ ಮೈಸೂರು ವಿಭಾಗದ 8 ಜಿಲ್ಲೆಗಳಲ್ಲಿ 914 ಪ್ರಕರಣಗಳಿದ್ದು, ಕೊಡಗು ಜಿಲ್ಲೆಯಲ್ಲಿ ಐ.ಎಂ.ಆರ್ ರೇಟ್ ಹೆಚ್ಚಿದೆ. ಮಕ್ಕಳ ವೆಂಟಿಲೇಟರ್ ಹಾಗೂ ಐಸಿಯು ಸಮಸ್ಯೆ ಇದ್ದು, ಇದನ್ನು ಶೀಘ್ರವಾಗಿ ಪರಿಹರಿಸುತ್ತೇವೆ ಎಂದು ತಿಳಿಸಿದರು.
Laxmi News 24×7