ಶಿರಸಿ (ಉತ್ತರ ಕನ್ನಡ): ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ, ಆ ವಿಷಯಕ್ಕೆ ಪೂರ್ಣವಿರಾಮ ಇಡಲಾಗಿದ್ದು, ಮುಖ್ಯಮಂತ್ರಿ ಬದಲಾವಣೆ ಕುರಿತು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಳಿಯಾಳ ಶಾಸಕ ಆರ್. ವಿ. ದೇಶಪಾಂಡೆ ಸ್ಪಷ್ಟಪಡಿಸಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಹೊಟ್ಟೆ ತುಂಬಾ ಉಪಹಾರ ಸೇವನೆ ಜತೆ ಹೊಟ್ಟೆ ತುಂಬಾ ಮಾತುಕತೆ ಮಾಡಿದ್ದಾರೆ ಎಂದರು.
ರಾಜ್ಯದಲ್ಲಿ ಅಭಿವೃದ್ಧಿಯಾಗುತ್ತಿಲ್ಲ ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ಅಭಿವೃದ್ಧಿಯಾಗುತ್ತಿದ್ದು, ಜನರ ಅಪೇಕ್ಷೆ ಇನ್ನೂ ಹೆಚ್ಚಿರಬಹುದು. ಎಲ್ಲ ಶಾಸಕರಿಗೂ ಅನುದಾನ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವದಲ್ಲಿ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಅಭಿವೃದ್ಧಿ ಯೋಜನೆಗಳ ಜತೆ ಜನರನ್ನು ಕಷ್ಟದಿಂದ ದೂರ ಮಾಡಲು ಐದು ಗ್ಯಾರಂಟಿ ಯೋಜನೆಯನ್ನು ನೀಡುವ ಪ್ರಯತ್ನ ಮಾಡಿದೆ ಎಂದು ಹೇಳಿದರು.
ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ಅಭಿವೃದ್ಧಿ ಯೋಜನೆ ಕುರಿತು ಚರ್ಚೆಗೆ ಪ್ರಾಧಾನ್ಯತೆ ನೀಡಬೇಕಾಗುತ್ತದೆ ಎಂದ ಅವರು, ಕೇಂದ್ರ ಸರ್ಕಾರವು ಇಡಿ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ವಿರುದ್ಧ ನ್ಯಾಷನಲ್ ಹೆರಾಲ್ಡ್ ಕೇಸ್ನಲ್ಲಿ ಈಗ ಪುನಃ ಸೇಡಿನ ರಾಜಕಾರಣಕ್ಕೆ ಎಫ್ಐಆರ್ ದಾಖಲು ಮಾಡಿಸಿದೆ.
Laxmi News 24×7